Sunday, November 21, 2010

ಸಂಬಂಧಕ್ಕೆ “ಸಹೋದರತೆ”ಯೇ ಬೆಸುಗೆ..............

ಸಹೋದರ”, “ಸಹೋದರಿ”, “ಅಣ್ಣ”, “ತಮ್ಮ”, “ಅಕ್ಕ”, “ತಂಗಿ”.................. ಇವೆಲ್ಲಾ ನನಗೆ ತುಂಬಾ ಆಪ್ಯಾಯಮಾನವಾದ ಸಂಬೋಧನೆಗಳು. ನಮ್ಮ ಮನಸ್ಸಿಗೆ ಹತ್ತಿರವಾದ, ಬೆಚ್ಚನೆಯ, ಸುರಕ್ಷತೆಯ, ನವಿರಾದ ಭಾವನೆಯನ್ನು ಹೊಮ್ಮಿಸುವ ಶಕ್ತಿ ಈ ಸಂಬೊಧನೆಗಳಿಗಿದೆ.
ತಾಯಿ ವಾತ್ಸಲ್ಯಮಯಿ, ಎಲ್ಲರಿಗೂ ಗೊತ್ತು ತಾನೇ? ಆದರೆ ಒಂದು ಮಗುವಿಗೆ ತನ್ನ ಆಂತರಿಕ ತುಮುಲವನ್ನು ಆಕೆಯೊಂದಿಗೆ ಹೇಳಿಕೊಳ್ಳಲಾಗದ ಯಾವುದೋ ಭಾವ. ಬಹುಷಃ ಈ ಸಂದಿಗ್ದತೆ ಭ್ರಾತೃತ್ವದಲ್ಲಿ ಇಲ್ಲ ಎನ್ನುವುದು ನನ್ನ ಭಾವನೆ. ಎಲ್ಲಾ ತಡೆಗಳನ್ನು ಮೀರಿದ, ಏಕತೆಯ, ತಾದಾತ್ಮ್ಯತೆಯ ಭಾವ ಅಲ್ಲಿದೆ. ಸಂಕೋಚವನ್ನು ಮೀರಿದ, ಭೇದವನ್ನು ಮರೆತ, ಕನಸಿನ ಕಲ್ಪನೆಯ ಸಾಕಾರದ ಮೂಲ ಇರುವುದು ಈ ಸಹೋದರತೆಯಲ್ಲಿ.

ಸಹೋದರತೆಯ ಭಾವ ಯಾವ ಕ್ಷಣದಲ್ಲಿ ಸ್ಪುರಣವಾಗುತ್ತೋ ಗೊತ್ತಾಗೊದಿಲ್ಲ. ಜೀವನದ ಯಾವುದೋ ಹಂತದಲ್ಲಿ ಯಾರ ಯಾರೊಂದಿಗೋ ಸಂಪರ್ಕ ಆಗುತ್ತೆ, ಒಡನಾಟ ನಡೆಯುತ್ತೆ. ಯಾವುದೋ ಕ್ಷಣದಲ್ಲಿ ಯಾರನ್ನೋ ನೋಡಿ, ಅಯ್ಯೋ ನನಗೊಂದು ಇಂಥಾ ತಂಗಿ ಇದ್ದರೆ...... ಅಥವಾ ಒಬ್ಬ ತಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಳ್ತೀವಿ. ಸಾಮಿಪ್ಯ ಹಾಗೇ ಇದ್ದಲ್ಲಿ, ಆ ಸಂಬಂಧ ಘಟ್ಟಿಯಾಗತ್ತೆ, ಬಿಡಿಸಲಾಗದ ನಂಟಾಗುತ್ತೆ. ಇಲ್ಲದಿದ್ದಲ್ಲಿ ಮುಂದೊಂದು ದಿನ ಮರೆತೂ ಬಿಡಬಹುದು. ಹಾಗಾಗಿ ಸಂಬಂಧಗಳು ಹಸಿಯಾಗಿ, ಹಸನಾಗಿ ಇರಬೇಕಾದಲ್ಲಿ, ಬೇಕಾದದ್ದು ಅವಿರತ ಸಂಪರ್ಕ.
ಈಗ ನಾನು ಹೇಳೊಕೆ ಹೊರಟದ್ದು, ಎಲ್ಲಿ ಈ ಭಾವಗಳು ಇಂದಿನ ಜನಜೀವನದ ತಾಕಲಾಟದಿಂದ, ಕೌಟುಂಬಿಕ ವ್ಯವಸ್ಥೆಯ ಕಾರಣದಿಂದ ನಲುಗಿ ಹೋಗ್ತಾ ಇವೆಯಾ ಅನ್ನೋದು. ನನ್ನ ಅಭಿಪ್ರಾಯ ತಪ್ಪೇ ಇರಬಹುದು............ ತಪ್ಪಾದಲ್ಲಿ ಸರಿಪಡಿಸಿಕೊಳ್ತೀನಿ. ನಾನು ಹೇಳ್ತಿರೋದು ಬಹುತೇಕ ಇಂದಿನ ಜನಮಾನಸದಲ್ಲಿ ಕಾಣುತ್ತಿರುವ ವಿಚಾರವನ್ನು.

ಈಗ ನೀವೇ ಕಲ್ಪಿಸಿಕೊಳ್ಳಿ............ ನಿಮಗೊಬ್ಬಳು ಒಡಹುಟ್ಟಿದ ಅಥವಾ ಒಡನಾಡಿಯಾದ ತಂಗಿ ಇರಬಹುದು. ವಿವಾಹ ಪೂರ್ವದ ಜೀವನದ ನಿಮ್ಮ ಒಂಟಿತನದ ಕ್ಷಣಗಳಲ್ಲಿ ಆಕೆ ನಿಮ್ಮ ಕಣ್ಣೊರೆಸಿರಬಹುದು. ಆಮೇಲೆ ನಿಮ್ಮ ಮದುವೆಯಾಗತ್ತೆ ಮಕ್ಕಳಾಗ್ತಾರೆ........... ಅದೇ ರೀತಿ ಆಕೆಯದೂ ಕೂಡ. ನಿಮ್ಮ ನಿಮ್ಮ ಜಂಜಾಟದಲ್ಲಿ ನೀವು ಬಿದ್ದು ತೊಳಲಾಡ್ತಾ, ನಿಮ್ಮ ತಂಗಿಯ ಬಗ್ಗೆ ಇದ್ದ ಕಾಳಜಿ, ಅಥವಾ ನಿಮ್ಮ ಅಣ್ಣನ ಬಗ್ಗೆ ಇರುವ ಕಾಳಜಿ ಕಡಿಮೆ ಆಗಿದ್ಯಾ? ಪ್ರಾಮಾಣಿಕವಾಗಿ ಕೇಳಿಕೊಳ್ಳಿ. ಹಾಗಾದಲ್ಲಿ ಬಹುತೇಕ ಜನರ ಉತ್ತರ ಹೌದು ಅಂತಲೇ ಬರತ್ತೆ. ಹಾಗಾದರೆ ಹೀಗೇಕೆ ಅನ್ನೊ ಪ್ರಶ್ನೆ ನನ್ನನ್ನ ಕಾಡ್ತಾನೇ ಇದೆ. ಭ್ರಾತೃತ್ವ ಅನ್ನೋದು ನಮ್ಮ ಅತ್ಯುನ್ನತ, ಅವರ್ಣನೀಯ ನಂಬಂಧ. ಅದನ್ನು ಹಾಗೇಯೇ ಜತನದಿಂದ ಕಾಪಾಡಿಕೊಂಡು ಹೋಗಲು ನಮ್ಮಲ್ಲಿ ಸಮಯ ಇಲ್ವಾ? ಇದೆ ತಾನೇ? ಹಾಗಾದರೆ ಕೊಂಚವಾದರೂ ಅತ್ತ ಗಮನಿಸೋಣ ಅಲ್ವೆ....

Sunday, October 3, 2010

'ಕನಸು’ ನಮ್ಮ ಸಾಧನೆಗೆ ಪ್ರೇರಕ.

ನಾನು ಹಲವು ಸಾರಿ ಈ “ಕನಸು” ಎನ್ನುವ ಪದದ ಬಗ್ಗೆ, ಅದರ ಅರ್ಥ ವಿವರಣೆಯ ಬಗ್ಗೆ, ಅದರ ವ್ಯಾಪ್ತಿಯ ಬಗ್ಗೆ, ವಿಚಾರ ಮಾಡ್ತಾ ಇರ್ತೇನೆ. ಬಹುಷಃ ಕನಸೇ ಇಲ್ಲದಿದ್ದರೆ ಈ ಜಗತ್ತಿನ ಅತ್ಯದ್ಭುತ ವೈಜ್ನಾನಿಕ ಅನ್ವೇಷಣೆಗಳು ಇರುತ್ತಿರಲಿಲ್ಲ, ಈ ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿದ್ಯತೆಗಳು ಇರುತ್ತಿರಲಿಲ್ಲ, ಹಾಗೆಯೇ ಬಹುಷ ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲವೇನೊ....

ಹಾಗಾಗಿ ನಾವು ಈಗ ಮಾಡಬೇಕಾದದ್ದು, ನಮ್ಮ ಮಕ್ಕಳಿಗೆ ಕನಸು ಕಾಣಲು ಬಿಡುವುದು. ಅವರನ್ನು ಅವರಂತೆಯೇ ಇರಲು ಬಿಡುವುದು. ಒಂದು ಸಣ್ಣ ಎಳೆ ಚಿಗುರಿಗೂ ಕೂಡ ಒಂದು ಕನಸಿರುತ್ತದಂತೆ, ಅದೆಂದರೆ, ತಾನು ಚಿಗುರೊಡೆದು ಹೆಮ್ಮರವಾಗಿ ಬೆಳೆದು ಫಲ ಕಾಣಬೇಕೆನ್ನುವುದು. ಹಾಗಾಗಿ ಅದು ಚಿಗುರೊಡೆಯುವುದನ್ನು ನೀವು ತಪ್ಪಿಸೋದಕ್ಕಾಗಲ್ಲ, ನೀವು ಒಂದು ಕಡೆ ಚಿವುಟಿದರೆ ಅದು ಇನ್ನೊಂದೆಡೆ ಟಿಸಿಲೊಡೆಯುತ್ತದೆ. ಹಾಗಾಗಿ ನಮ್ಮ ಮಕ್ಕಳ ಬದುಕಿನಲ್ಲೂ ಒಂದು ರೀತಿಯ ಸಹಜತೆ ಇರಲಿ. ನಮ್ಮ ಅಹಮಿಕೆಯ ಉಗುರಿನಿಂದ ಅವರ ಕನಸಿನ ಚಿಗುರನ್ನು ಚಿವುಟುವುದು ಬೇಡ.

ಆದರೆ ನಮ್ಮ ಬಾದ್ಯತೆ ಇರುವುದು ಅವರಿಗೆ ಧನಾತ್ಮಕವಾಗಿ ಬೆಳೆಯುವ ಪರಿಸರ ನೀಡುವುದು. ಆದಷ್ಟು ಮಟ್ಟಿಗೆ ಹೊರಗಿನ ಪ್ರಾಣಿಗಳು ತಿನ್ನದಂತೆ ಗಿಡಗಳಿಗೆ ಟ್ರೀ ಗಾರ್ಡ್ ಇಡುತ್ತಾರಲ್ಲಾ.... ಹಾಗೆ. ನಾವು ನಮ್ಮ ಮಕ್ಕಳ ರಕ್ಷಕರಾಗಬಹುದು, ವಿನಃ, ಅವರ ಕನಸಿಗೆ ಭಂಗ ತರುವ ಯಾವ ಹಕ್ಕೂ ಕೂಡ ನಮಗಿಲ್ಲ.

’ಕನಸು’ ನಮ್ಮ ಸಾಧನೆಗೆ ಪ್ರೇರಕ. ನಾನು ಹೇಳೋದು ನಕ್ಷತ್ರಗಳನ್ನು ಹಿಡಿದು ತರಬೇಕೆನ್ನುವ ಕನಸಲ್ಲ. ಬದಲಾಗಿ, ಕನಸುಗಳು ಸಾಧ್ಯತೆಯ ಪರಿಧಿಯಲ್ಲಿ ಇರಬೇಕು. ಜೊತೆಯಲ್ಲಿ ಅದನ್ನು ಸಾಧಿಸಬೇಕೆನ್ನುವ ಛಲ ಒಡಮೂಡಬೇಕು. ನಮ್ಮ ಕನಸುಗಳು ಒಡಮೂಡುವುದು ಸೃಜನಶೀಲತೆಯಿಂದ. ಸೃಜನಾತ್ಮಕತೆ ಹೊರಹೊಮ್ಮುವುದು ಅವಲೋಕಿಸುವವನ ದೃಷ್ಠಿಯಿಂದ. ಅವಲೋಕಿಸುವ ವಸ್ತು ಒಂದೇ ಆಗಿರಬಹುದು, ಆದರೆ ಒಬ್ಬ ಸೃಜನಶೀಲ ವ್ಯಕ್ತಿಯ ಅವಲೋಕನಕ್ಕೂ, ಒಬ್ಬ ಸಾಮಾನ್ಯ ವ್ಯಕ್ತಿಯು ಅವಲೋಕಿಸುವುದಕ್ಕೂ ಇರುವ ವ್ಯತ್ಯಾಸವೇ ಸೃಜನಶೀಲ ಕನಸಿನ ಹುಟ್ಟು.

Thursday, June 24, 2010

ಈ ಜಗತ್ತಿನಲ್ಲಿ ಇರೋದು ಎರಡು ಮಾತ್ರ.......ಧನ (+) ಇನ್ನೊಂದು, ಋಣ (-)

ನಾವು ಈ ಧನಾತ್ಮಕ ಮತ್ತು ಋಣಾತ್ಮಕತೆಯ ಬಗ್ಗೆ ವಿಚಾರ ಮಾಡುತ್ತಾ ಹೋದರೆ, ಬಹಳಷ್ಟು ವಿಚಾರಗಳು ಅನಾವರಣವಾಗುತ್ತಾ ಹೋಗುತ್ತದೆ. ಇವೆರಡೂ ಶಕ್ತಿಯ ಒಂದೊಂದು ರೂಪ. ವೈಜ್ನಾನಿಕವಾಗಿ ಹೇಳಬೇಕೆಂದರೆ ಒಂದಿಲ್ಲದೇ ಇನ್ನೊಂದಿಲ್ಲ.

ಈ ಎರಡೂ ಶಕ್ತಿಗಳನ್ನು ನಾವು ಯಾವ ರೂಪದಲ್ಲಿ ಬೇಕಾದರೂ ಗುರುತಿಸಬಹುದು ಅಲ್ಲವೇ? ಈ ಬ್ರಹ್ಮಾಂಡದ ಹುಟ್ಟಿನಿಂದ ಹಿಡಿದು, ಜಗತ್ತಿನಲ್ಲಿ ನಡೆಯುವ ಎಲ್ಲಾ ಸ್ಥಿತ್ಯಂತರಗಳಿಗೆ ಮೂಲ ಕಾರಣ ಈ ಎರಡೂ ಗುಣಗಳು. ಕೊನೆಯಲ್ಲಿ ನಮ್ಮ ಕಲ್ಪನೆಯ ಪ್ರಕಾರ ಇದರ ಅಂತ್ಯವೂ ಈ ಮೂಲಕವೇ ಅಲ್ಲವೇ?

ಇದರ ಜೊತೆಗೆ ಇರುವಂಥದು ಚಲನಶೀಲತೆ, ಈ ಜಗತ್ತಿನಲ್ಲಿ ಯಾವುದೂ ನಿಂತಿಲ್ಲ......ಇಲ್ಲಿ ನಿರಂತರತೆ ಇದೆ. ನಮ್ಮ ಕಣ್ಣಿಗೆ ನಿಂತಂತೆ ಕಾಣುವ ಜಡವಸ್ತುವಿನಲ್ಲೂ ಇರುವ ಪರಮಾಣುವಿನಲ್ಲಿ ಚಲನಶೀಲತೆ ಇದೆ. ಅದರಲ್ಲೂ ಧನ ಮತ್ತು ಋಣಗಳಿವೆ. ಹಾಗಾಗಿ ಈ ಧನಾತ್ಮಕ ಮತ್ತು ಋಣಾತ್ಮಕತೆಯಲ್ಲಿ ಇರುವ ಚಲನಶೀಲತೆಯ ಕಾರಣದಿಂದ, ನಮ್ಮ ಸ್ವಭಾವಜನ್ಯವಾದ ಧನ ಮತ್ತು ಋಣಾತ್ಮಕತೆಯಲ್ಲಿ ಬದಲಾವಣೆಯನ್ನು ಕಾಣುತ್ತಾ ಇರುತ್ತೇವೆ.





Tuesday, June 8, 2010

ಪ್ರಕೃತಿಯಲ್ಲಿರುವ ಸಹಜತೆ ನಮ್ಮಲ್ಲೇಕಿಲ್ಲ?

ಈ ಪ್ರಕೃತಿ ಯಾವಾಗಲೂ ತನ್ನತನವನ್ನು ಕಾಯ್ದುಕೊಂಡಿದೆ ಎಂದು ನಿಮಗನಿಸುವುದಿಲ್ಲವೇ? ನನಗೆ ಇನ್ನೂ ನೆನಪಿದೆ, ನಮ್ಮ ಮನೆಯ ಬಗಲಿನಲ್ಲೊಂದು ಮಾವಿನಮರ ಇದೆ, ಬಹುಷಃ ನಾನು ಕಣ್ಣುಬಿಟ್ಟು ನೋಡುತ್ತಿದ್ದಾಗಿನಿಂದ ಹೂವುಹಣ್ಣು ಕಾಯಿ ಬಿಟ್ಟು ಸಮೃದ್ಧವಾಗಿರುವ ಮರ. ಈಗ ನಾನು ಪ್ರೌಢ, ನನಗೆ ಸಂಸಾರವಿದೆ, ಮಕ್ಕಳು ಅಂಬೆಗಾಲಿಡುತ್ತಿದ್ದಾರೆ, ಈಗಲೂ ಆ ಮರ ಹಾಗೆಯೇ ಇದೆ. ಸಮಯದಲ್ಲಿ ಹೂವಾಗಿ, ಕಾಯಾಗಿ, ಹಣ್ಣಾಗಿ, ನಮ್ಮೆಲ್ಲರಿಗೂ ಸಿಹಿ ಹಂಚುತ್ತದೆ.

ನನಗೆ ಬುದ್ಧಿ ತಿಳಿದಾಗಿನಿಂದಲೂ ಕಾಡುವುದು ಒಂದೇ ಪ್ರಶ್ನೆ, ಮಾವಿನಮರಕ್ಕೆ ಯಾವಾಗಲೂ ಮಾವಿನ ಹಣ್ಣೇ ಏಕಾಗಬೇಕು, ಅಂಥದೇ ಜಾತಿಯ ಹಣ್ನೇ ಏಕಾಗಬೇಕು ಬೇರೆಯದು ಏಕಾಗಬಾರದು? ಬಹುಷಃ ನಿಮ್ಮಲ್ಲಿ ಬಹಳಷ್ಟು ಮಂದಿಗೆ ಇಂಥಹ ವಿಲಕ್ಷಣ ಪ್ರಶ್ನೆ ಬಂದಿರಬಹುದು. ಇದಕ್ಕೆ ಇದೊಂದೇ ಉದಾಹರಣೆಯಲ್ಲ, ಇಂಥದ್ದೇ ಎಷ್ಟೋ ಇದೆ. ಹಾಗಾದಲ್ಲಿ ಪ್ರಕೃತಿಯ ಈ ಸಹಜತೆಗೆ ಕಾರಣವೇನು? ಇದಕ್ಕೆ ವೈಜ್ನಾನಿಕ ಕಾರಣ ಹುಡುಕುತ್ತಾ ಕೂರುವುದು ನನಗೆ ಇಷ್ಟವಿಲ್ಲ, ಪ್ರತಿಯೊಂದು ಕ್ರಿಯೆಗೂ ಒಂದು ಪೂರಕ ಶಕ್ತಿಯಿದೆ, ಅದರಿಂದ ಈ ಕ್ರಿಯೆಗಳೆಲ್ಲಾ ಅರಿವಿಲ್ಲೆದಂತೇ ನಡೆದುಕೊಂಡು ಹೋಗುತ್ತಿವೆ.

ಆದರೆ ನನ್ನ ಪ್ರಶ್ನೆ, ಪ್ರಕೃತಿಯ ಈ ಸಹಜತೆ ನಮಗೆ ಕೊಡುತ್ತಿರುವ ಪಾಠ ಏನು ಎನ್ನುವುದು. ನಮ್ಮ ಇಂದಿನ ವೈಜ್ನಾನಿಕ ಅನ್ವೇಷಣೆಗಳು, ಹೊಸತನ್ನು ಹುಡುಕುವ ಹಂಬಲ, ಆಮೂಲಕ ನಾವು ಪ್ರಕೃತಿಯೊಂದಿಗೆ ಕಳೆದುಕೊಳ್ಳುತ್ತಿರುವ ತಾದಾತ್ಮ್ಯತೆ, ಇವೆಲ್ಲಾ ತುಂಬಾ ವಿರೋಧಾಭಾಸವಾಗಿ ಕಾಣುತ್ತಿದೆಯಲ್ಲವೇ? ನಮ್ಮ ಹೊಸತು ಹುಡುಕುವ ಹಂಬಲಕ್ಕೆ ಈ ಸಹಜತೆಯ ಹೊಳಪು ಇರಲಿ ಎಂಬುದು ಆಶಯ

Wednesday, May 26, 2010

ವ್ಯವಸ್ಥೆಗಳೇಕೆ ಪತನಹೊಂದುತ್ತಿವೆ?

ನಮ್ಮ ಹಳೆಯ ತಲೆಮಾರಿನ ಸಾಂಸ್ಕೃತಿಕ ಶೈಕ್ಷಣಿಕ ಕೇಂದ್ರಗಳಲ್ಲಿಯ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಎಲ್ಲರ ಮನಸ್ಸಿನಲ್ಲೂ ಬಂದುಹೋಗುವ ಪ್ರಶ್ನೆ ಇದು. ಅದರ ಸ್ಥಾಪಕರು ಯಾವ ಉದ್ದೇಶದಿಂದ ಸಂಸ್ಥೆಯನ್ನೋ, ಸಾಂಸ್ಕೃತಿಕ ಕೇಂದ್ರವನ್ನೋ ಕಟ್ಟಿದರೋ, ಅದಕ್ಕೆ ವ್ಯತಿರಿಕ್ತವಾಗಿ ಅಲ್ಲಿನ ವಾತವರಣ ಕಲುಷಿತವಾಗುತ್ತಿದೆ. ನಾನು ಯಾವುದೇ ಒಂದು ಸಂಸ್ಥೆಯನ್ನು ಬೊಟ್ಟುಮಾಡಿ ಹೇಳುತ್ತಿಲ್ಲ, ನಮ್ಮ ವ್ಯವಸ್ಥೆಯಲ್ಲಿ ಕಾಣುತ್ತಿರುವ ಒಟ್ಟಭಿಪ್ರಾಯ ಇದು.

ಪೂಜನೀಯ ಸ್ಥಳಗಳೋ, ಶ್ರದ್ಧಾಕೇಂದ್ರಗಳೋ ಅವು ಯಾವುದೇ ಆಗಿರಬಹುದು, ಅಲ್ಲಿಗೆ ಹೋಗುವ ಮೊದಲು ನಮ್ಮ ಮನಸ್ಸಿನಲ್ಲಿ ಯಾವುದೋ ತೆರನಾದ ಚೈತನ್ಯಶೀಲ ಕಲ್ಪನೆಗಳನ್ನು ಹೊತ್ತು ಹೋಗುತ್ತೇವೆ. ಅಲ್ಲಿಂದ ತಿರುಗಿ ಬರುವಾಗ ಮನಸ್ಸಿನ ತುಂಬಾ ನಿರಾಸೆ. ಇದೆಲ್ಲಕ್ಕೆ ಕಾರಣ ಅಲ್ಲಿಯ ಕಲುಷಿತ ವಾತಾವರಣ.

ಸಾಮಾಜಿಕ ಸಾಮರಸ್ಯಕ್ಕೆ, ಜನಮಾನಸದ ಔನ್ನತ್ಯಕ್ಕೆ ಇಂತಹ ಕೇಂದ್ರಗಳು ಕಾರಣವಾಗಬೇಕು. ಆದರೆ ಅದರ ಫಲಶ್ರುತಿಯೇ ಬೇರೆ ಆಗುತ್ತಿದೆ. ಯಾವುದೇ ಒಂದು ಸಮಾಜ ಹಿತ ಕಾರ್ಯ ಆಗಬೇಕಾದಾಗ ಅದಕ್ಕೆ ಕಾರಣಕರ್ತೃ ಸಮಾಜ, ಅದರ ಸಹಮತಿ. ಒಪ್ಪಿಕೊಂಡ ತತ್ವದ ಜೊತಯಲ್ಲಿ ಇನ್ನೊಂದನ್ನು ಸೇರಿಸುವುದು ಸುಲಭ, ಅದು ಸಮಷ್ಠಿಯಾಗಿರಬೇಕಷ್ಠೇ. ತತ್ವ ಸಿದ್ಧಾಂತಕ್ಕೆ ಬದ್ಧರಾದ ವ್ಯಕ್ತಿಗಳ ಸಾಮಿಪ್ಯ ಸಿಗುವುದು ಇಂತಹ ಕೇಂದ್ರಗಳ ಮೂಲಕ ಮಾತ್ರ. ಅದು ಸಮಷ್ಠಿಯಾಗಿರಬೇಕಷ್ಟೇ.

Tuesday, May 25, 2010

ಉಸ್ತಾದ್ ಹಮೀದ್ ಖಾನ್

ಶ್ರೀಯುತರು ನನ್ನ ಗುರುಗಳು ಅಂತ ಹೇಳೋದಕ್ಕೆ ನನಗೆ ತುಂಬಾಹೆಮ್ಮೆ. ಇಂತಹ ಖ್ಯಾತರನ್ನು ಅವರ ವಾದನ ಸುಧೆಯನ್ನು ಸವಿದದ್ದು ಯಲ್ಲಾಪುರದ ಜನತೆಯ ಭಾಗ್ಯ.

ಉಸ್ತಾದ್ ಹಮೀದ್ ಖಾನ್ ಅವರು ಇಂದೋರ್ ಬಿಕಾನೇರ್ ಘರಾನಾ ದ ಸಿತಾರ್ ವಾದಕರು. ಇವರು ಸಿತಾರ್ ರತ್ನ ರೆಹಮತ್ ಖಾನ್ ಅವರ ೬ ನೆಯ ಪೀಳಿಗೆ. ಸಿತಾರ್ ವಾದನದಲ್ಲಿ ಇವರು ತೋರುವ ನಿಷ್ಠೆ ಅತ್ಯದ್ಭುತ. ಅವರ ಗರಡಿಯಲ್ಲಿ ಪಳಗಿದ ಅವರ ಮಗ ಮೊಹಸಿನ್ ಖಾನ್ ಒಬ್ಬ ಅಧ್ಭುತ ಯುವ ಪ್ರತಿಭೆ. ಕೇವಲ ೬ ನೆಯ ವಯಸ್ಸಿನಲ್ಲಿ ಸಿತಾರ್ ಅನ್ನು ಹಿಡಿದ ಈತ ಈಗ ಕರ್ನಾಟಕದಲ್ಲಿ ಸಿತಾರ್ ಪ್ರೇಮಿಗಳ ಮನೆಮಾತು.

ಆದರೆ ನಾನು ಈಗ ಹೇಳಹೊರಟಿರುವುದು ಕೇವಲ ಹಮೀದ್ ಖಾನ್ ಅವರ ಸಂಗೀತ ಸಾಧನೆಯನ್ನಲ್ಲ. ಅವರ ಸಮಾಜ ಸೇವೆಯ ಇನ್ನೊಂದು ಮುಖವನ್ನು. ನಮ್ಮ ಸಂವಿತ್ ಗೆ ಮೂಲ ಪ್ರೇರಣೆಯೇ ಶ್ರೀಯುತರು. ಅದಕ್ಕಾಗಿಯೇ ನನ್ನ ಮತ್ತು ಗುರುಗಳ ಸಾಮರಸ್ಯ ಅವಿನಾಭಾವವಾಗಿದೆ. ಶ್ರೀಯುತರು ಕಲ್ಕೇರಿ ಶಾಲೆಯ ಏಳ್ಗೆಯಲ್ಲಿ ತಮ್ಮನ್ನು ಬಹಳಷ್ಟು ಸಮಯದಿಂದ ತೊಡಗಿಸಿಕೊಂಡು ಬಂದವರು. ಆ ಅನಾಥ ಮಕ್ಕಳ ಜೊತೆ ಸಮಯ ಕಳೆದವರು. ಇಂತಹ ಪೂಜ್ಯರು ನಮ್ಮ ಜೊತೆ ಇದ್ದು, ನಮ್ಮ ಸಂವಿತ್ ಅನ್ನು ಉದ್ಘಾಟನೆ ಮಾಡಿದ್ದರಿಂದ. ಮುಂಬರುವ ದಿನಗಳಲ್ಲಿ ನಾವೂ ಕೂಡಾ ಅವರ ಆಶಯಗಳನ್ನು ಮೈಗೂಡಿಸಿಕೊಳ್ಲೋಣ, ಎನ್ನಬಹುದಲ್ಲವೇ?

ಎಲ್ಲಿ ಅವಕಾಶಗಳಿವೆಯೋ, ಸೌಲಭ್ಯಗಳಿವೆಯೋ ಅಲ್ಲಿ ನಮ್ಮ ಅವಶ್ಯಕತೆ ಏನಿದೆ? ಎಲ್ಲಿ ನಿಜವಾದ ಅವಶ್ಯಕತೆ ಇದೆಯೋ, ಯಾರು ನಿರ್ಗತಿಕರೋ ಅವರನ್ನು ತಲುಪುವ ಪ್ರಯತ್ನ ನಮ್ಮದಾಗಲಿ. ಆಗ ಶಿಕ್ಷಣ ಸಾರ್ಥಕತೆಯನ್ನು ಕಾಣಲಿದೆ.

Sunday, May 23, 2010

ವ್ಯವಸ್ಥೆಯ ಜೊತೆ ನಾವು

ಕೆಲ ದಿನಗಳ ಹಿಂದೆ ಒಬ್ಬ ಸಮಾಜದ ಗಣ್ಯ ವ್ಯಕ್ತಿಗಳೊಬ್ಬರ ಸಾಮಿಪ್ಯವಾಗಿತ್ತು, ಅವರ ಜೊತೆ ನನ್ನ ಕನಸನ್ನು ಹಂಚಿಕೊಂಡೆ, ನನ್ನ ಉದ್ದೇಶಗಳ ಬಗ್ಗೆ ಸಲಹೆ ಕೇಳಿದೆ, ಅವರ ಅಭಿಪ್ರಾಯದ ಸಾರಾಂಶವಿಷ್ಟು.......

ನೀವು ಯಾವುದೇ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಮಾಡಿ, ಅದರ ಮೂಲ ಉದ್ದೇಶ ವ್ಯವಸ್ಥೆಯನ್ನು ಹಾಳುಮಾಡುವುದಾಗಿರಬಾರದು, ನಮ್ಮ ಹಳ್ಳಿಗಳು ಉಳಿಯಬೇಕು, ಅವುಗಳ ಬೆಳವಣಿಗೆಗೆ ಪೂರಕ ಶಿಕ್ಷಣ ಕೊಡಿ, ನಮ್ಮ ಹಳ್ಳಿಯ ಸೊಗಡನ್ನು ಉಳಿಸುವ ಬೆಳೆಸುವಂತಹ ಶಿಕ್ಷಣಕೊಡಿ ಅಂದರು.

ಒಂದು ರೀತಿಯಿಂದ ಅವರು ಹೇಳಿದ್ದು ಸರಿ ಎಂದು ಕಾಣುತ್ತದೆ. ಇಂದು ನಮ್ಮ ಹಳ್ಳಿಗಳು ವಯಸ್ಕರ ಗೂಡಾಗುತ್ತಿದೆ, ಹೊಸ ತಲೆಮಾರಿನ ನಮ್ಮಂತಹ ಜನರು, ಅವಕಾಶದ ಬೆನ್ನೇರಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದೇವೆ. ನಮ್ಮ ಮಕ್ಕಳಿಗೆ ಹಳ್ಳಿಯ ಸೊಗಡಿನ ಗಂಧವೇ ಇಲ್ಲವಾಗುತ್ತಿದೆ. ನಾವು ಅನುಭವಿಸಿದ ಆ ಹಳ್ಳಿಗಾಡಿನ ಸುಖ ನಮ್ಮ ಮಕ್ಕಳಿಗೆ ಇಲ್ಲವಾಗಿದೆ. ಮನೆಯಿಂದ ಹೊರಗೆ ಹೋದರೆ ಶಾಲೆ, ಜನಸಂಧಣಿ, ಅದೇ ಕಲುಷಿತ ವಾತಾವರಣ. ಅಜ್ಜಿಯ ಹಳೆಯ ಹಾಡಿನ ಕಂಪು, ಅಜ್ಜನಜೊತೆ ಓಡಾಡುವ ಅವಕಾಶ ಎಷ್ಟು ಮಕ್ಕಳಿಗೆ ಇದೆ ಹೇಳಿ. ಅವೆಲ್ಲಾ ನಮ್ಮಕಾಲದಲ್ಲಿ ಆಯಿತು ಅಲ್ಲವೇ?

ಒಂದು ರೀತಿಯಲ್ಲಿ ನಾವೆಲ್ಲಾ ಹೊಸ ವ್ಯವಸ್ಥೆಯ ಬಲಿಪಶುಗಳು. ನಮ್ಮ ಕಿರಿವಯಸ್ಸಿನಲ್ಲಿ ನಾವು ಅನುಭವಿಸಿದ ಬಡತನ, ಇಲ್ಲಿನ ವ್ಯವಸ್ಥೆಯ ಕೊರತೆ ನಮ್ಮನ್ನು ಆಕಡೆಗೆ ಸೆಳೆದಿದೆ. ಆದರೆ ಇಂದು ಆ ಪರಿಸ್ಥಿತಿ ನಮ್ಮ ಹಳ್ಳಿಗಳಲ್ಲಿಲ್ಲ, ಎಲ್ಲೆಂದರಲ್ಲಿ ರಸ್ತೆಗಳು, ಜೊತೆಯಲ್ಲಿ ವಾಹನ ವ್ಯವಸ್ಥೆ , ಬೇಕುಬೇಕಾದ ಎಲ್ಲವುಗಳೂ ನಮ್ಮಲ್ಲಿವೆ. ಆದರೂ ಈ ರೀತಿಯ ಪಲಾಯನ ಏಕೆ? ಇಲ್ಲಿದ್ದುಕೊಂಡೇ ನಮ್ಮನ್ನು ರೂಪಿಸಿಕೊಳ್ಳುವ ಶಿಕ್ಷಣದ ಕೊರತೆ, ಅಥವಾ ನಮ್ಮವರ ಜೊತೆ ನಾವೂ ಹೋಗೋಣ ಎನ್ನುವ ಸೆಳೆತ, ಅಥವಾ ಪಟ್ಟಣದ ಆಧುನಿಕತೆಯ ಸೆಳೆತ, ಇವೆಲ್ಲ ಪಲಾಯನಕ್ಕೆ ಕಾರಣ.

ಇಂತಹ ಮಾನಸಿಕತೆ ನಮ್ಮ ಮಕ್ಕಳಲ್ಲಿ ಇಲ್ಲವಾಗಬೇಕು, ಅಂತಹ ಶಿಕ್ಷಣ ವ್ಯವಸ್ಥೆ ಬರಬೇಕು ಎನ್ನುವುದು ಅವರ ಭಿಪ್ರಾಯವಾಗಿರಬಹುದು. ಹೊಸ ದೂರದೃಷ್ಟಿಗೆ ದಿಶೆ ನೀಡಿದ ಹಿರಿಯರಿಗೆ ಧನ್ಯವಾದಗಳು.

Friday, May 21, 2010

ಶಿಕ್ಷಣದ ಅರ್ಥ

ಬಹಳ ದಿನದಿಂದ ನನ್ನ ಮನಸ್ಸಿನಲ್ಲಿ ಬಂದುಹೋಗುತ್ತಿರುವ ಪ್ರಶ್ನೆ, ಇಂದು ನಾವು ಕಲಿಯುತ್ತಿರುವ ಶಿಕ್ಷಣ ನಿಜವಾದ ಸರ್ವತೋಮುಖ ಶಿಕ್ಷಣವೇ ಅನ್ನುವುದು.
ಇಂದು ನಾವು ಕೊಡುತ್ತಿರುವ ಶಿಕ್ಷಣ ಕೇವಲ ಬೌದ್ಧಿಕ ಮಟ್ಟದ ಶಿಕ್ಷಣ ಎಂಬಂತೆ ನನಗೆ ಭಾಸವಾಗುತ್ತಿದೆ. ಇಲ್ಲದೇ ಹೋದಲ್ಲಿ ಇಂದು ನಾವುನೋಡುತ್ತಿರುವ ಅಪ್ರಾಪ್ತವಯಸ್ಕರ ಆತ್ಮಹತ್ಯೆಗಳು, ಅಸಪರ್ಪಕ ಚಿಂತನೆಗಳು, ವಿಕ್ಷಿಪ್ತ ನಡವಳಿಕೆಗಳು ಇವೆಲ್ಲಕ್ಕೆ ಕಾರಣಗಳೇನು? ವಿಚಾರಿಸಿದ್ದೇವೆಯೇ.
ಸರಿ, ನಾವೇನೋ ಬೌದ್ಧಿಕವಾಗಿ ಮುನ್ನಡೆಯುತ್ತಿದ್ದೇವೆ, ನಮ್ಮ ಮಕ್ಕಳ ಐಕ್ಯೂ ಹೆಚ್ಚಾಗಿದೆ, ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ ಇನ್ನೇನು ಬೇಕು ಎನ್ನುವುದು ನಮ್ಮ ಬಹುತೇಕ ಪಾಲಕರ ಅಭಿಮತ. ಆದರೆ ಅದೇ ಸಮಯದಲ್ಲಿ ನಮ್ಮ ಮಕ್ಕಳು ಎಮ್ ಕ್ಯೂ (Moral Quotient) ವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಮಗನಿಸುವುದಿಲ್ಲವೇ? ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅನಿಸುವುದಿಲ್ಲವೇ? ಅನಿಸುತ್ತದೆ ತಾನೇ?
ಹಾಗಾದಲ್ಲಿ ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವ ಪ್ರಶ್ನೆ ಸ್ವಾಭಾವಿಕವಾಗಿ ಬರುತ್ತದೆ. ಉತ್ತರ ನಮ್ಮಲ್ಲಿಯೇ ಇದೆ, ಇದಕ್ಕೆ ಕಾರಣ ನಮ್ಮ ಅಸ್ವಾಭಾವಿಕ ಶಿಕ್ಷಣ ಶೈಲಿ, ಪಠ್ಯಕ್ರಮ. ಜೊತೆಯಲ್ಲಿ ನಮ್ಮ ಪರಿಸರ, ಅದು ಮನೆಯಲ್ಲಿರಬಹುದು ಅಥವಾ ಹೊರ ಪ್ರಪಂಚದ ಸೆಳೆತವಿರಬಹುದು. ಅದನ್ನು ಗಮನಿಸಿ ಯಾವುದನ್ನು ಪುರಸ್ಕರಿಸಿ ಅಳವಡಿಸಿಕೊಳ್ಳಬೇಕು, ಯಾವುದು ಪರಿತ್ಯಜ್ಯವೋ ಅದನ್ನು ನಿರ್ಲಕ್ಷಿಸಬೇಕೆಂಬ ಧನಾತ್ಮಕ, ಋಣಾತ್ಮಕ ವಿವೇಚನೆಯನ್ನು ಬೆಳೆಸದೇ ಇರುವುದು.

Sunday, May 16, 2010

ನಮಗಾಗಿ, ನಮ್ಮೆಲ್ಲರಿಗಾಗಿ ಈ ಸಂವಿತ್

ಸಹೃದಯರೇ,
ನಾವೆಲ್ಲಾ ಹುಟ್ಟಿ, ಅಡಿಯಿಟ್ಟು, ಕಲಿತು, ಬೆಳೆದ ನಮ್ಮೆಲ್ಲರ ಈ ಯಲ್ಲಾಪುರ ಎಲ್ಲರಿಗೂ ಪ್ರೀತಿಯೇ ತಾನೇ? ನಾವು ಈಗ ಎಲ್ಲೇ ಇರಲಿ, ಯಾವ ಕ್ಷೇತ್ರದಲ್ಲೇ ಇರಲಿ, ನಮ್ಮೆಲ್ಲರನ್ನೂ ಭಾವನಾತ್ಮಕವಾಗಿ, ಬೆಸೆಯುವ ಶಕ್ತಿ, ಚೈತನ್ಯ ಈ ನೆಲದಲ್ಲಿದೆ. ನಾವೆಲ್ಲಾ ನಮ್ಮ ಊರಿಗೆ ಬಂದಾಗ, ಇಲ್ಲಿ ನಮ್ಮನ್ನು ಓಲೈಸುವವರಿದ್ದಾರೆ, ಮಾನಸಿಕವಾಗಿ ಬೆಂಬಲಿಸುವವರಿದ್ದಾರೆ. ಆ ಶಕ್ತಿಯೇ ನಮ್ಮೆಲ್ಲರನ್ನೂ ಮುನ್ನಡೆಸಿದೆ.

ಇಂತಹ ಸಾವಿರಾರು ಸಂಖ್ಯೆಯ ಯುವಕರ, ಹಿರಿಯರ ಒಂದು ದೊಡ್ಡ ಗುಂಪು ಯಲ್ಲಾಪುರದಿಂದ ದೂರದ ಊರುಗಳಲ್ಲಿ ನೆಲೆಸಿದೆ. ನಾವೆಲ್ಲಾ ಕಲಿತು ಬೆಳೆದ ನಮ್ಮ ಊರಿನ ಜನಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಒಲವು ಹೊಂದಿರುವ ನಮ್ಮ ನಿಮ್ಮಂತಹ ಜನರಿದ್ದಾರೆ. ಇಂಥಹ ಜನಗಳ ಒಂದು ಭಾಗವಾದ ನನಗೆ ಬಂದಂತಹ ಯೋಚನೆಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಮನಸ್ಸು ಮಾಡುತ್ತಿದ್ದೇನೆ.

ಇಂದಿಗೆ ಸುಮಾರು ೨ ವರ್ಷಗಳ ಹಿಂದೆ ನಾನು ನಮ್ಮ ಭಾಗದ ಜನರ ಒಳಿತಿಗಾಗಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಮನಸ್ಸು ಮಾಡಿದೆ. ಆದರೆ ಅದಕ್ಕೆ ಬೇಕಾಗುವ ಪ್ರಮಾಣದ ಹಣಬಲ ನನ್ನ ಬಳಿ ಇರಲಿಲ್ಲ. ಆದರೆ ಮಾಡಬೇಕೆನ್ನುವ ಅದಮ್ಯ ಉತ್ಸಾಹ ಮಾತ್ರ ಇತ್ತು. ಇಂಥಹ ಸಮಾಜಹಿತ ಕಾರ್ಯಕ್ಕೆ ಹಣದ ಜೊತೆಗೆ ಜನರ ಬೆಂಬಲವೂ ಅವಶ್ಯವೇ ತಾನೇ? ಹಾಗಾಗಿ ಈ ಬಗ್ಗೆ ಬಹಳಷ್ಟು ಜನರ ಸಂಪರ್ಕ ಮಾಡಿದೆ. ನಾನು ಸಂಪರ್ಕಿಸಿದ ಎಲ್ಲರಿಂದಲೂ ಸಕಾರಾತ್ಮಕ ಉತ್ತರವೇನೂ ಬಂತು. ಆದರೆ ನನ್ನ ಸಂಕಲ್ಪ ಮಾತ್ರ ಯೋಚನೆಯ ಸ್ತರದಲ್ಲಿಯೇ ಉಳಿಯಿತು. ಆದರೆ ಕಳೆದ ಹಲವು ವರ್ಷಗಳಿಂದ ನಾನು ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ಕೊಡುವದನ್ನು ಮುಂದುವರಿಸಿಕೊಂಡು ಬರುತ್ತಿದ್ದೆ. ಇಂತಹ ಅಲ್ಪಪ್ರಮಾಣದ ಸಹಾಯದಿಂದ ದೊಡ್ಡ ಸಾಧನೆಯೇನೂ ಆಗದೇ ಇದ್ದರೂ, ನನ್ನ ಮಟ್ಟಿಗೆ ಅದು ಬಹಳ ಅಮೂಲ್ಯ ಮತ್ತು ಅದರಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ ನೆಮ್ಮದಿ ಸಿಗುತ್ತಿತ್ತು.

ಈ ಎಲ್ಲಾ ಯೋಚನೆಗಳಿಗೆ, ನಾನು ಮತ್ತು ನನ್ನ ಹಲವು ಮಿತ್ರರು ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ, ಕಳೆದ ೧೭-೦೪-೨೦೧೦ ರಂದು ಮುನ್ನುಡಿಯನ್ನು ಬರೆದಿದ್ದೇವೆ. ನಮ್ಮ ಘನೋದ್ದೇಶಗಳಿಗಾಗಿ ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸುತ್ತಿರುವ ಸಂಸ್ಥೆಯ ಹೆಸರು

"ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)"

ಇದು ನಮ್ಮ ನಿಮ್ಮೆಲ್ಲರ ಸಂಸ್ಥೆ, ಉತ್ತಮ ಉದ್ದೇಶಗಳಿಗಾಗಿ ಎಲ್ಲರನ್ನೂ ಒಟ್ಟಾಗಿ ಸೇರಿಸುವಂತಹ ನೆಲೆ. ಈ ಸೂರಿನಡಿಯಲ್ಲಿ ಕೆಲಸಮಾಡಲು ತಾವೆಲ್ಲಾ ಆಸಕ್ತಿ ತೋರಿಸುವಿರೆಂದು ನನ್ನ ಭಾವನೆ. ಇಂಥಹ ಸಂಸ್ಥೆಯನ್ನು ಕಾನೂನಿನ ಚೌಕಟ್ಟಿನೊಳಗೆ ತರಲು ಇದರ ನೋಂದಣಿಯನ್ನೂ ಮಾಡಲಾಗಿದೆ. ಜೊತೆಯಲ್ಲಿ ಆದಾಯಕರ ವಿನಾಯತಿಯನ್ನು ದಾನಿಗಳಿಗೆ ಕೊಡಮಾಡುವ ಸಲುವಾಗಿ ಆದಾಯಕರ ಇಲಾಖೆಯ ನಾನೂನಿನನ್ವಯ 80G ನೋಂದಣಿಯನ್ನೂ ಮಾಡಲಾಗುವದು.

ನಮ್ಮ ಕನಸುಗಳು:
1. ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವುದು, ಈ ಉದ್ದೇಶಕ್ಕಾಗಿ ಪ್ರತೀವರ್ಷವೂ ತಾಲೂಕಿನಾಧ್ಯಂತ ಪ್ರತಿಭಾನ್ವೇಷಣೆಯನ್ನು ಮಾಡುವುದು.
2. ಬಡ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸುವುದು.
3. ಹೆಚ್ಚಿನ ವ್ಯಾಸಂಗ ಮಾಡಬಯಸುವ ಮಕ್ಕಳಿಗೆ ಆನಿಟ್ಟಿನಲ್ಲಿ ಮಾರ್ಗದರ್ಶನ ವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸುವುದು.
4. ನಮ್ಮ ಪಟ್ಟಣದಲ್ಲಿ ಸುಸಜ್ಜಿತವಾದ ಮತ್ತು ಎಲ್ಲಾ ಆಸಕ್ತ ಓದುಗರಿಗೆ ಅನೂಕೂಲವಾಗುವಂತಹ ಗ್ರಂಥಾಲಯದ ನಿರ್ಮಾಣ.
5. ನಮ್ಮ ಅತೀ ದೊಡ್ಡ ಕನಸೆಂದರೆ, ಆಳ್ವಾಸ್ ಶೈಕಣಿಕ ಸಂಸ್ಥೆಯ ರೀತಿಯಲ್ಲೇ ಯಲ್ಲಾಪುರದಲ್ಲಿ ಅಂಥಹ ಒಂದು ಶಿಕ್ಷಣ ಸಂಸ್ಥೆಯನ್ನು ಭವಿಷ್ಯದಲ್ಲಿ ಕಟ್ಟುವುದು.
6. ಅನಾಥ ಮಕ್ಕಳಿಗಾಗಿ ಸಮ್ಮ ಭಾಗದಲ್ಲಿ ಅನಾಥಾಲಯವನ್ನು ನಿರ್ಮಾಣ ಮಾಡುವುದು.
7. ನಮ್ಮ ನಾಡು, ನುಡಿ, ಸಂಸ್ಕೃತಿಯ ಏಳ್ಗೆಗಾಗಿ, ನಿಯಮಿತವಾಗಿ ಅಂತಹ ಸಾಂಕೃತಿಕ ಸಮಾರಂಭಗಳನ್ನು ನಡೆಸುವುದು. ಅಂಥಹ ಸಮಾರಂಭಗಳು ನಾಡಿನ ಹೆಮ್ಮೆಯ ಗರಿಮೆಗಾಳಾಗಿರಬೇಕೆನ್ನುವುದು ನಮ್ಮ ಅಪೇಕ್ಷೆ.

ಇಂತಹ ನೂರೊಂದು ಕನಸುಗಳನ್ನು ಹೊತ್ತು ನಾವು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ. ನಮ್ಮ ಭಾಗದ ಜನ, ನೆಲ, ಜಲ, ಪರಿಸರ, ಸಂಸ್ಕೃತಿಯ ಏಳ್ಗೆಗಾಗಿ ದುಡಿಯಬೇಕೆನ್ನುವ ನಿಮ್ಮೆಲ್ಲರ ಅಪೇಕ್ಷೆ, ಈ ಸಂಸ್ಥೆಯ ಮೂಲಕ ಸಾಕಾರಗೊಳ್ಳಲಿ ಎನ್ನುವುದು ನಮ್ಮ ಬಿನ್ನಹ.

ನಮ್ಮೆಲ್ಲರ ಅಂತಿಮ ಗುರಿ, ನಾವು ಮಾಡಿದ ಸಹಾಯಗಳು ಹೆಚ್ಚು ಸೂಕ್ತ ವ್ಯಕ್ತಿಗಳಿಗೆ ತಲುಪಬೇಕು, ಆಮೂಲಕ ಕಷ್ಟದಲ್ಲಿ ಇರುವವರಿಗೆ ಅದರಿಂದ ಪ್ರಯೋಜನವಾಗಬೇಕು. ಆ ಕಾರಣಕ್ಕಾಗಿ ಮೂರು ರೀತಿಯಲ್ಲಿ ಧನಸಂಗ್ರಹದ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ.

ಅವುಗಳೆಂದರೆ:
1. ಸಹಾಯಧನಕ್ಕಾಗಿ ವಾರ್ಷಿಕವಾಗಿ ದತ್ತಿನಿಧಿ ಸಂಗ್ರಹಣೆ.( ಪ್ರತಿವರ್ಷವೂ ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವವರಿಗಾಗಿ )
2. ಸಂಸ್ಥೆಯ ಮೂಲನಿಧಿ ಸಂಗ್ರಹಣೆ. ( ಪ್ರತಿಷ್ಠಾನದ ಮೂಲ ನಿಧಿಗಾಗಿ ಧನ ಸಹಾಯ ಮಾಡುವವರಿಗಾಗಿ)
3. ಸರಕಾರ ಮತ್ತು ಇತರ ಸಂಸ್ಥೆಗಳಿಂದ ಸಹಾಯ. ( ಸರಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ದೊರೆಯಬಹುದಾದ ಅನುದಾನ)

ಆದ್ದರಿಂದ ಹಿರಿಯರ ಒಂದು ಮಾತಿದೆ " ಎಲ್ಲಾ ಮಹತ್ಕಾರ್ಯಗಳು ಸಾಧಿತವಾಗಿದ್ದು, ಚಿಕ್ಕಚಿಕ್ಕ ಕನಸುಗಳಿರುವ ದೊಡ್ಡ ವ್ಯಕ್ತಿಗಳಿಂದ ಅಲ್ಲ, ಬದಲಾಗಿ ಅದು ಸಾಧ್ಯವಾಗಿರುವದು ದೊಡ್ಡದೊಡ್ಡ ಕನಸುಗಳಿರುವ ಚಿಕ್ಕ ವ್ಯಕ್ತಿಗಳಿಂದ ಮಾತ್ರ". ಹಾಗಾಗಿ ನಾವೆಲ್ಲಾ ಚಿಕ್ಕ ವ್ಯಕ್ತಿಗಳು ಸೇರಿ ತಳೆದಂತ ಈ ಕನಸುಗಳ ಸಾಕಾರಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ. ಈ ಕಾರ್ಯದಲ್ಲಿ ನೀವು ನಮ್ಮ ಬಗ್ಗೆ ತೋರುವ ವಿಶ್ವಾಸ, ಆಸಕ್ತಿಯೇ ನಮಗೆ ಶ್ರೀರಕ್ಷೆ. ನಿಮ್ಮ ಅಮೂಲ್ಯ ಸಲಹೆಯ ಜೊತೆಗೆ ಧನಸಹಾಯವನ್ನೂ ಮಾಡಿ ಪ್ರೋತ್ಸಾಹಿಸಿ.

ಕನಸುಗಳು ನಿಮ್ಮಿಂದ ಸಾಕಾರಗೊಳ್ಳಲಿ,

ನಿಮ್ಮವನಾದ,

ಶ್ರೀಪತಿ ಭಟ್.
ಕಾರ್ಯದರ್ಶಿ
ಸಂವಿತ್ ಪ್ರತಿಷ್ಠಾನ (ರಿ)
ಈ ವಿಷಯಗಳಿಗಾಗಿ ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)
ಕೆ ಬಿ ರಸ್ತೆ, ಯಲ್ಲಾಪುರ- 581 359 ( ಉತ್ತರ ಕನ್ನಡ)
ಪೋನ್ ಸಂಖ್ಯೆ: (08419)261049
ಮೊಬೈಲ್: 9900770650 (ಶ್ರೀಪತಿ ಭಟ್) ಈ ಮೇಲ್ ವಿಳಾಸ: bhat.shripati@gmail.com

KNOWING AND BELIEVING

There is a huge difference between "knowing" and "believing". In philosophy, we always say "Know yourself". Th...