ಸಹೃದಯರೇ,
ನಾವೆಲ್ಲಾ ಹುಟ್ಟಿ, ಅಡಿಯಿಟ್ಟು, ಕಲಿತು, ಬೆಳೆದ ನಮ್ಮೆಲ್ಲರ ಈ ಯಲ್ಲಾಪುರ ಎಲ್ಲರಿಗೂ ಪ್ರೀತಿಯೇ ತಾನೇ? ನಾವು ಈಗ ಎಲ್ಲೇ ಇರಲಿ, ಯಾವ ಕ್ಷೇತ್ರದಲ್ಲೇ ಇರಲಿ, ನಮ್ಮೆಲ್ಲರನ್ನೂ ಭಾವನಾತ್ಮಕವಾಗಿ, ಬೆಸೆಯುವ ಶಕ್ತಿ, ಚೈತನ್ಯ ಈ ನೆಲದಲ್ಲಿದೆ. ನಾವೆಲ್ಲಾ ನಮ್ಮ ಊರಿಗೆ ಬಂದಾಗ, ಇಲ್ಲಿ ನಮ್ಮನ್ನು ಓಲೈಸುವವರಿದ್ದಾರೆ, ಮಾನಸಿಕವಾಗಿ ಬೆಂಬಲಿಸುವವರಿದ್ದಾರೆ. ಆ ಶಕ್ತಿಯೇ ನಮ್ಮೆಲ್ಲರನ್ನೂ ಮುನ್ನಡೆಸಿದೆ.
ಇಂತಹ ಸಾವಿರಾರು ಸಂಖ್ಯೆಯ ಯುವಕರ, ಹಿರಿಯರ ಒಂದು ದೊಡ್ಡ ಗುಂಪು ಯಲ್ಲಾಪುರದಿಂದ ದೂರದ ಊರುಗಳಲ್ಲಿ ನೆಲೆಸಿದೆ. ನಾವೆಲ್ಲಾ ಕಲಿತು ಬೆಳೆದ ನಮ್ಮ ಊರಿನ ಜನಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಒಲವು ಹೊಂದಿರುವ ನಮ್ಮ ನಿಮ್ಮಂತಹ ಜನರಿದ್ದಾರೆ. ಇಂಥಹ ಜನಗಳ ಒಂದು ಭಾಗವಾದ ನನಗೆ ಬಂದಂತಹ ಯೋಚನೆಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಮನಸ್ಸು ಮಾಡುತ್ತಿದ್ದೇನೆ.
ಇಂದಿಗೆ ಸುಮಾರು ೨ ವರ್ಷಗಳ ಹಿಂದೆ ನಾನು ನಮ್ಮ ಭಾಗದ ಜನರ ಒಳಿತಿಗಾಗಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಮನಸ್ಸು ಮಾಡಿದೆ. ಆದರೆ ಅದಕ್ಕೆ ಬೇಕಾಗುವ ಪ್ರಮಾಣದ ಹಣಬಲ ನನ್ನ ಬಳಿ ಇರಲಿಲ್ಲ. ಆದರೆ ಮಾಡಬೇಕೆನ್ನುವ ಅದಮ್ಯ ಉತ್ಸಾಹ ಮಾತ್ರ ಇತ್ತು. ಇಂಥಹ ಸಮಾಜಹಿತ ಕಾರ್ಯಕ್ಕೆ ಹಣದ ಜೊತೆಗೆ ಜನರ ಬೆಂಬಲವೂ ಅವಶ್ಯವೇ ತಾನೇ? ಹಾಗಾಗಿ ಈ ಬಗ್ಗೆ ಬಹಳಷ್ಟು ಜನರ ಸಂಪರ್ಕ ಮಾಡಿದೆ. ನಾನು ಸಂಪರ್ಕಿಸಿದ ಎಲ್ಲರಿಂದಲೂ ಸಕಾರಾತ್ಮಕ ಉತ್ತರವೇನೂ ಬಂತು. ಆದರೆ ನನ್ನ ಸಂಕಲ್ಪ ಮಾತ್ರ ಯೋಚನೆಯ ಸ್ತರದಲ್ಲಿಯೇ ಉಳಿಯಿತು. ಆದರೆ ಕಳೆದ ಹಲವು ವರ್ಷಗಳಿಂದ ನಾನು ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ಕೊಡುವದನ್ನು ಮುಂದುವರಿಸಿಕೊಂಡು ಬರುತ್ತಿದ್ದೆ. ಇಂತಹ ಅಲ್ಪಪ್ರಮಾಣದ ಸಹಾಯದಿಂದ ದೊಡ್ಡ ಸಾಧನೆಯೇನೂ ಆಗದೇ ಇದ್ದರೂ, ನನ್ನ ಮಟ್ಟಿಗೆ ಅದು ಬಹಳ ಅಮೂಲ್ಯ ಮತ್ತು ಅದರಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ ನೆಮ್ಮದಿ ಸಿಗುತ್ತಿತ್ತು.
ಈ ಎಲ್ಲಾ ಯೋಚನೆಗಳಿಗೆ, ನಾನು ಮತ್ತು ನನ್ನ ಹಲವು ಮಿತ್ರರು ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ, ಕಳೆದ ೧೭-೦೪-೨೦೧೦ ರಂದು ಮುನ್ನುಡಿಯನ್ನು ಬರೆದಿದ್ದೇವೆ. ನಮ್ಮ ಘನೋದ್ದೇಶಗಳಿಗಾಗಿ ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸುತ್ತಿರುವ ಸಂಸ್ಥೆಯ ಹೆಸರು
"ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)" ಇದು ನಮ್ಮ ನಿಮ್ಮೆಲ್ಲರ ಸಂಸ್ಥೆ, ಉತ್ತಮ ಉದ್ದೇಶಗಳಿಗಾಗಿ ಎಲ್ಲರನ್ನೂ ಒಟ್ಟಾಗಿ ಸೇರಿಸುವಂತಹ ನೆಲೆ. ಈ ಸೂರಿನಡಿಯಲ್ಲಿ ಕೆಲಸಮಾಡಲು ತಾವೆಲ್ಲಾ ಆಸಕ್ತಿ ತೋರಿಸುವಿರೆಂದು ನನ್ನ ಭಾವನೆ. ಇಂಥಹ ಸಂಸ್ಥೆಯನ್ನು ಕಾನೂನಿನ ಚೌಕಟ್ಟಿನೊಳಗೆ ತರಲು ಇದರ ನೋಂದಣಿಯನ್ನೂ ಮಾಡಲಾಗಿದೆ. ಜೊತೆಯಲ್ಲಿ ಆದಾಯಕರ ವಿನಾಯತಿಯನ್ನು ದಾನಿಗಳಿಗೆ ಕೊಡಮಾಡುವ ಸಲುವಾಗಿ ಆದಾಯಕರ ಇಲಾಖೆಯ ನಾನೂನಿನನ್ವಯ 80G ನೋಂದಣಿಯನ್ನೂ ಮಾಡಲಾಗುವದು.
ನಮ್ಮ ಕನಸುಗಳು:1. ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವುದು, ಈ ಉದ್ದೇಶಕ್ಕಾಗಿ ಪ್ರತೀವರ್ಷವೂ ತಾಲೂಕಿನಾಧ್ಯಂತ ಪ್ರತಿಭಾನ್ವೇಷಣೆಯನ್ನು ಮಾಡುವುದು.
2. ಬಡ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸುವುದು.
3. ಹೆಚ್ಚಿನ ವ್ಯಾಸಂಗ ಮಾಡಬಯಸುವ ಮಕ್ಕಳಿಗೆ ಆನಿಟ್ಟಿನಲ್ಲಿ ಮಾರ್ಗದರ್ಶನ ವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸುವುದು.
4. ನಮ್ಮ ಪಟ್ಟಣದಲ್ಲಿ ಸುಸಜ್ಜಿತವಾದ ಮತ್ತು ಎಲ್ಲಾ ಆಸಕ್ತ ಓದುಗರಿಗೆ ಅನೂಕೂಲವಾಗುವಂತಹ ಗ್ರಂಥಾಲಯದ ನಿರ್ಮಾಣ.
5. ನಮ್ಮ ಅತೀ ದೊಡ್ಡ ಕನಸೆಂದರೆ, ಆಳ್ವಾಸ್ ಶೈಕಣಿಕ ಸಂಸ್ಥೆಯ ರೀತಿಯಲ್ಲೇ ಯಲ್ಲಾಪುರದಲ್ಲಿ ಅಂಥಹ ಒಂದು ಶಿಕ್ಷಣ ಸಂಸ್ಥೆಯನ್ನು ಭವಿಷ್ಯದಲ್ಲಿ ಕಟ್ಟುವುದು.
6. ಅನಾಥ ಮಕ್ಕಳಿಗಾಗಿ ಸಮ್ಮ ಭಾಗದಲ್ಲಿ ಅನಾಥಾಲಯವನ್ನು ನಿರ್ಮಾಣ ಮಾಡುವುದು.
7. ನಮ್ಮ ನಾಡು, ನುಡಿ, ಸಂಸ್ಕೃತಿಯ ಏಳ್ಗೆಗಾಗಿ, ನಿಯಮಿತವಾಗಿ ಅಂತಹ ಸಾಂಕೃತಿಕ ಸಮಾರಂಭಗಳನ್ನು ನಡೆಸುವುದು. ಅಂಥಹ ಸಮಾರಂಭಗಳು ನಾಡಿನ ಹೆಮ್ಮೆಯ ಗರಿಮೆಗಾಳಾಗಿರಬೇಕೆನ್ನುವುದು ನಮ್ಮ ಅಪೇಕ್ಷೆ.
ಇಂತಹ ನೂರೊಂದು ಕನಸುಗಳನ್ನು ಹೊತ್ತು ನಾವು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ. ನಮ್ಮ ಭಾಗದ ಜನ, ನೆಲ, ಜಲ, ಪರಿಸರ, ಸಂಸ್ಕೃತಿಯ ಏಳ್ಗೆಗಾಗಿ ದುಡಿಯಬೇಕೆನ್ನುವ ನಿಮ್ಮೆಲ್ಲರ ಅಪೇಕ್ಷೆ, ಈ ಸಂಸ್ಥೆಯ ಮೂಲಕ ಸಾಕಾರಗೊಳ್ಳಲಿ ಎನ್ನುವುದು ನಮ್ಮ ಬಿನ್ನಹ.
ನಮ್ಮೆಲ್ಲರ ಅಂತಿಮ ಗುರಿ, ನಾವು ಮಾಡಿದ ಸಹಾಯಗಳು ಹೆಚ್ಚು ಸೂಕ್ತ ವ್ಯಕ್ತಿಗಳಿಗೆ ತಲುಪಬೇಕು, ಆಮೂಲಕ ಕಷ್ಟದಲ್ಲಿ ಇರುವವರಿಗೆ ಅದರಿಂದ ಪ್ರಯೋಜನವಾಗಬೇಕು. ಆ ಕಾರಣಕ್ಕಾಗಿ ಮೂರು ರೀತಿಯಲ್ಲಿ ಧನಸಂಗ್ರಹದ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ.
ಅವುಗಳೆಂದರೆ:
1. ಸಹಾಯಧನಕ್ಕಾಗಿ ವಾರ್ಷಿಕವಾಗಿ ದತ್ತಿನಿಧಿ ಸಂಗ್ರಹಣೆ.( ಪ್ರತಿವರ್ಷವೂ ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವವರಿಗಾಗಿ )
2. ಸಂಸ್ಥೆಯ ಮೂಲನಿಧಿ ಸಂಗ್ರಹಣೆ. ( ಪ್ರತಿಷ್ಠಾನದ ಮೂಲ ನಿಧಿಗಾಗಿ ಧನ ಸಹಾಯ ಮಾಡುವವರಿಗಾಗಿ)
3. ಸರಕಾರ ಮತ್ತು ಇತರ ಸಂಸ್ಥೆಗಳಿಂದ ಸಹಾಯ. ( ಸರಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ದೊರೆಯಬಹುದಾದ ಅನುದಾನ)
ಆದ್ದರಿಂದ ಹಿರಿಯರ ಒಂದು ಮಾತಿದೆ
" ಎಲ್ಲಾ ಮಹತ್ಕಾರ್ಯಗಳು ಸಾಧಿತವಾಗಿದ್ದು, ಚಿಕ್ಕಚಿಕ್ಕ ಕನಸುಗಳಿರುವ ದೊಡ್ಡ ವ್ಯಕ್ತಿಗಳಿಂದ ಅಲ್ಲ, ಬದಲಾಗಿ ಅದು ಸಾಧ್ಯವಾಗಿರುವದು ದೊಡ್ಡದೊಡ್ಡ ಕನಸುಗಳಿರುವ ಚಿಕ್ಕ ವ್ಯಕ್ತಿಗಳಿಂದ ಮಾತ್ರ". ಹಾಗಾಗಿ ನಾವೆಲ್ಲಾ ಚಿಕ್ಕ ವ್ಯಕ್ತಿಗಳು ಸೇರಿ ತಳೆದಂತ ಈ ಕನಸುಗಳ ಸಾಕಾರಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ. ಈ ಕಾರ್ಯದಲ್ಲಿ ನೀವು ನಮ್ಮ ಬಗ್ಗೆ ತೋರುವ ವಿಶ್ವಾಸ, ಆಸಕ್ತಿಯೇ ನಮಗೆ ಶ್ರೀರಕ್ಷೆ. ನಿಮ್ಮ ಅಮೂಲ್ಯ ಸಲಹೆಯ ಜೊತೆಗೆ ಧನಸಹಾಯವನ್ನೂ ಮಾಡಿ ಪ್ರೋತ್ಸಾಹಿಸಿ.
ಕನಸುಗಳು ನಿಮ್ಮಿಂದ ಸಾಕಾರಗೊಳ್ಳಲಿ,
ನಿಮ್ಮವನಾದ,
ಶ್ರೀಪತಿ ಭಟ್.ಕಾರ್ಯದರ್ಶಿ
ಸಂವಿತ್ ಪ್ರತಿಷ್ಠಾನ (ರಿ)
ಈ ವಿಷಯಗಳಿಗಾಗಿ ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)
ಕೆ ಬಿ ರಸ್ತೆ, ಯಲ್ಲಾಪುರ- 581 359 ( ಉತ್ತರ ಕನ್ನಡ)
ಪೋನ್ ಸಂಖ್ಯೆ: (08419)261049
ಮೊಬೈಲ್: 9900770650 (ಶ್ರೀಪತಿ ಭಟ್) ಈ ಮೇಲ್ ವಿಳಾಸ:
bhat.shripati@gmail.com